ದೃಢೀಕರಣ ಪರಿಸರವ್ಯವಸ್ಥೆಗಳು
ಆಧಾರ್ ದೃಢೀಕರಣ ಎಂದರೆ ಏನು?
ಆಧಾರ್ ದೃಢೀಕರಣ ಎಂದರೆ ಆಧಾರ್ ಸಂಖ್ಯೆಯನ್ನು ಅದರ ಪರಿಶೀಲನೆಗಾಗಿ ಡೆಮೋಗ್ರಾಫಿಕ್ ಅಥವಾ ಬಯೋಮೆಟ್ರಿಕ್ ಮಾಹಿತಿಯೊಂದಿಗೆ ಕೇಂದ್ರ ಗುರುತಿಸುವಿಕೆಗಳ ಮಾಹಿತಿ ಭಂಡಾರಕ್ಕೆ (ಸಿಐಡಿಆರ್) ಸಲ್ಲಿಸುವ ಪ್ರಕ್ರಿಯೆಯಾಗಿರುತ್ತದೆ ಹಾಗೂ ಅಂತಹ ಭಂಡಾರವು ತನ್ನಲ್ಲಿ ಲಭ್ಯವಿರುವ ಮಾಹಿತಿಯ ಆಧಾರದ ಮೇರೆಗೆ ಯಥಾರ್ಥತೆಯನ್ನು ಅಥವಾ ಅದರಲ್ಲಿ ಇರಬಹುದಾದ ಕೊರತೆಯನ್ನು ಪರಿಶೀಲಿಸುತ್ತದೆ.
ಸಾಮಾನ್ಯ ಅವಲೋಕನ
ಆಧಾರ್ ಸಂಖ್ಯೆ ಅಥವಾ ಅದರ ದೃಢೀಕರಣವು ಆಧಾರ್ ಸಂಖ್ಯೆಯನ್ನು ಹೊಂದಿರುವವರಿಗೆ ಸಂಬಂಧಿಸಿದಂತೆ ಪೌರತ್ವದ ಅಥವಾ ನೆಲೆಸಿರುವಿಕೆಯ ಹಕ್ಕನ್ನಾಗಲಿ ಅಥವಾ ಸಾಕ್ಷಾಧಾರವನ್ನಾಗಲೀ ಸ್ವತ: ತಾನೇ ನೀಡುವುದಿಲ್ಲ.
ಅನೇಕ ಕೋರಿಕೆಯನ್ನು ಸಲ್ಲಿಸುವ ಸಂಸ್ಥೆಗಳು (ಅಥವಾ ಸೇವೆಗಳನ್ನು ಒದಗಿಸುವವರು) ಬಳಕೆದಾರ ಸೇವೆಗಳು, ಸಹಾಯಧನಗಳು ಅಥವಾ ಪ್ರಯೋಜನಗಳನ್ನು ಒದಗಿಸುವುದಕ್ಕೆ ಅನುಕೂಲ ಕಲ್ಪಿಸುವ ಸಾಧನವಾಗಿ ಉಪಯೋಗವಾಗುವಂತಹ ಗುರುತಿನ ಸಾಕ್ಷಾಧಾರಗಳನ್ನು ವೈಯಕ್ತಿಕ ವ್ಯಕ್ತಿಗಳು ಸಲ್ಲಿಸುವ ಅಗತ್ಯತೆಯನ್ನು ಹೊಂದಿರುತ್ತವೆ. ಅಂತಹ ಗುರುತಿನ ಸಾಕ್ಷಾಧಾರಗಳನ್ನು ಸಂಗ್ರಹಿಸುವ ವೇಳೆಯಲ್ಲಿ , ಈ ಸೇವೆಗಳನ್ನು ಒದಗಿಸುವವರು ವೈಯಕ್ತಿಕ ವ್ಯಕ್ತಿಗಳು ಸಲ್ಲಿಸಿದ ಗುರುತಿನ ಮಾಹಿತಿ ದಾಖಲೆಗಳು ಅಥವಾ ಸಾಕ್ಷಾಧಾರಗಳನ್ನು ಪರಿಶೀಲಿಸುವಲ್ಲಿ/ಖಚಿತಪಡಿಸಿಕೊಳ್ಳುವಲ್ಲಿ ಸವಾಲುಗಳನ್ನು ಎದುರಿಸುವರು.
ಆಧಾರ್ ದೃಢೀಕರಣದ ಉದ್ದೇಶವೆಂದರೆ, ಆಧಾರ್ ಸಂಖ್ಯೆಯನ್ನು ಹೊಂದಿರುವವರ ಗುರುತನ್ನು ಯಾವುದೇ ಸಮಯದಲ್ಲಿಯೇ ಆದರೂ, ಎಲ್ಲಿಯೇ ಆದರೂ ತತ್ ಕ್ಷಣದಲ್ಲಿ ದೃಢೀಕರಿಸುವ ರೀತಿಯಲ್ಲಿ ಒಂದು ಅಂಕೀಯ ಆನ್ ಲೈನ್ ಗುರುತಿನ ವೇದಿಕೆಯನ್ನು ಒದಗಿಸುವುದು ಆಗಿರುತ್ತದೆ.
ಭಾವಿಗುಪ್ರಾವು ಕೋರಿಕೆಯನ್ನು ಸಲ್ಲಿಸುವ ಸಂಸ್ಥೆಗಳು (ಸರ್ಕಾರ/ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳು/ಪ್ರತಿನಿಧಿ ಸಂಸ್ಥೆಗಳು) ಉಪಯೋಗಿಸಿಕೊಳ್ಳಬಹುದಾದ ಒಂದು ಸೇವೆಯಾಗಿ ಆಧಾರ್ ಆಧಾರಿತ ದೃಢೀಕರಣವನ್ನು ನೀಡುತ್ತದೆ. ಭಾವಿಗುಪ್ರಾದ ಈ ಸೇವೆಯನ್ನು ಕೋರಿಕೆಯನ್ನು ಸಲ್ಲಿಸುವ ಸಂಸ್ಥೆಗಳು ತಮ್ಮ ಗ್ರಾಹಕರು/ಉದ್ಯೋಗಿಗಳು/ಇತರೆ ಸಹಭಾಗಿಗಳ ಗುರುತನ್ನು ಅವರುಗಳಿಗೆ ಗ್ರಾಹಕ ಸೇವೆಗಳು/ಸಹಾಯಧನಗಳು/ಪ್ರಯೋಜನಗಳು/ವ್ಯಾಪಾರವ್ಯವಹಾರ ಕಾರ್ಯಚಟುವಟಿಕೆಗಳು/ಕಟ್ಟಡ-ಸ್ಥಳಗಳನ್ನು ಉಪಯೋಗಿಸಿಕೊಳ್ಳುವುದಕ್ಕೆ ಅವಕಾಶ ನೀಡುವ ಮೊದಲು ದೃಢೀಕರಿಸುವ ಸಲುವಾಗಿ ಬಳಸಿಕೊಳ್ಳಬಹುದು (ಅವರುಗಳ ವೈಯಕ್ತಿಕ ಗುರುತು ಮಾಹಿತಿಯ ಹೊಂದಾಣಿಕೆಯ ಆಧಾರದ ಮೇರೆಗೆ).
ದೃಢೀಕರಣದ ಮಾದರಿಗಳು -
- ಪ್ರಾಧಿಕಾರವು, ಕೋರಿಕೆಯನ್ನು ಸಲ್ಲಿಸುವ ಸಂಸ್ಥೆಯು ವಿದ್ಯುನ್ಮಾನೀಯವಾಗಿ ಈ ನಿಯಂತ್ರಣಗಳ ಅನುಸಾರ ಹಾಗೂ ಪ್ರಾಧಿಕಾರದಿಂದ ನಿರ್ದಿಷ್ಟಪಡಿಸಲಾಗಿರುವ ನಿರ್ದಿಷ್ಟ ನಿರೂಪಣೆಗಳ ಅನುಸಾರ ಕಳುಹಿಸುವ ಕೋರಿಕೆಯ ಆಧಾರದ ಮೇರೆಗೆ ದೃಢೀಕರಣದ ಕೋರಿಕೆಯನ್ನು ಒಪ್ಪಿಕೊಳ್ಳತಕ್ಕದ್ದು.
- ದೃಢೀಕರಣವನ್ನು ಈ ಕೆಳಗಿನ ಮಾದರಿಗಳ ಮೂಲಕ ಮಾಡಬಹುದು:
-
- ಡೆಮೋಗ್ರಾಫಿಕ್ ದೃಢೀಕರಣ: ಆಧಾರ್ ಸಂಖ್ಯೆಯನ್ನು ಹೊಂದಿರುವವರಿಂದ ಪಡೆದುಕೊಳ್ಳಲಾಗಿರುವ ಆಧಾರ್ ಸಂಖ್ಯೆ ಮತ್ತು ಬಯೋಮೆಟ್ರಿಕ್ ಸಿಐಡಿಆರ್ ನಲ್ಲಿ ಲಭ್ಯವಿರುವ ಆಧಾರ್ ಸಂಖ್ಯೆಯನ್ನು ಹೊಂದಿರುವವರ ಡೆಮೋಗ್ರಾಫಿಕ್ ಮಾಹಿತಿಯ ಜೊತೆಯಲ್ಲಿ ಹೋಲಿಕೆ ಮಾಡಲಾಗುವುದು.
- ಒಂದು ಸಲದ ಪಿನ್ ಆಧಾರಿತ ದೃಢೀಕರಣ: ಸೀಮಿತವಾದ ಸಮಯದಲ್ಲಿ ಊರ್ಜಿತಗೊಂಡಿರುವಂತಹ ಒಂದು ಸಲದ ಪಿನ್ (ಒಟಿಪಿ) ಅನ್ನು ಪ್ರಾಧಿಕಾರದಲ್ಲಿ ನೋಂದಣಿ ಮಾಡಿಸಿಕೊಳ್ಳಲಾಗಿರುವ ಆಧಾರ್ ಸಂಖ್ಯೆಯನ್ನು ಹೊಂದಿರುವವರ ಮೊಬೈಲು ಸಂಖ್ಯೆಗೆ ಮತ್ತು/ಅಥವಾ ಇ-ಮೈಲ್ ವಿಳಾಸಕ್ಕೆ ಕಳುಹಿಸಲಾಗುವುದು ಅಥವಾ ಇತರೆ ಸೂಕ್ತ ರೀತಿಯಲ್ಲಿ ತಂತ್ರಾಂಶ ಅನ್ವಯದಿಂದ ಪಡೆದುಕೊಳ್ಳಲಾಗುವುದು. ಆಧಾರ್ ಸಂಖ್ಯೆಯನ್ನು ಹೊಂದಿರುವವರು ದೃಢೀಕರಣದ ವೇಳೆಯಲ್ಲಿ ಈ ಒಂದು ಸಲದ ಪಿನ್ ಅನ್ನು ಆತನ/ಆಕೆಯ ಆಧಾರ್ ಸಂಖ್ಯೆಯೊಂದಿಗೆ ಒದಗಿಸತಕ್ಕದ್ದು ಹಾಗೂ ಅದನ್ನು ಪ್ರಾಧಿಕಾರವು ತನ್ನ ತಂತ್ರಾಂಶ ಅನ್ವಯದಿಂದ ಪಡೆದುಕೊಂಡಂತಹ ಒಂದು ಸಲದ ಪಿನ್ ನೊಂದಿಗೆ ಹೋಲಿಕೆ ಮಾಡಲಾಗುವುದು.
- ಬಯೋಮೆಟ್ರಿಕ್ ಆಧಾರದ ಮೇರೆಗಿನ ದೃಢೀಕರಣ: ಆಧಾರ್ ಸಂಖ್ಯೆಯನ್ನು ಹೊಂದಿರುವವರು ಸಲ್ಲಿಸುವ ಆಧಾರ್ ಸಂಖ್ಯೆ ಮತ್ತು ಬಯೋಮೆಟ್ರಿಕ್ ಮಾಹಿತಿಯನ್ನು ಸಿಐಡಿಆರ್ ನಲ್ಲಿ ಲಭ್ಯವಿರುವ ಆಧಾರ್ ಅನ್ನು ಹೊಂದಿರುವವರ ಬಯೋಮೆಟ್ರಿಕ್ ಮಾಹಿತಿಯ ಜೊತೆಯಲ್ಲಿ ಹೋಲಿಕೆ ಮಾಡಲಾಗುವುದು. ಇದು ಬೆರಳುಮುದ್ರಿಕೆಗಳ ಆಧಾರ ಮೇರೆಗೆ ಆಗಿರಬಹುದು ಅಥವಾ ಕಣ್ಣುಪಾಪೆಗಳ ಆಧಾರದ ಮೇರೆಗೆ ಆಗಿರಬಹುದು ಅಥವಾ ಸಿಐಡಿಆರ್ ನಲ್ಲಿ ಸಂಗ್ರಹಿಸಿಡಲಾಗಿರುವ ಬಯೋಮೆಟ್ರಿಕ್ ಮಾಹಿತಿಯ ಆಧಾರದ ಮೇರೆಗಿನ ಇತರೆ ಬಯೋಮೆಟ್ರಿಕ್ ವಿಧಾನದಲ್ಲಿ ಆಗಿರಬಹುದು.
- ವಿವಿಧ ಅಂಶಗಳ ಆಧಾರದ ಮೇರೆಗಿನ ದೃಢೀಕರಣ: ದೃಢೀಕರಣಕ್ಕಾಗಿ ಮೇಲೆ ತಿಳಿಸಲಾದ ಮಾದರಿಗಳ ಎರಡು ಅಥವಾ ಅದಕ್ಕೂ ಹೆಚ್ಚಿನ ಒಂದು ಸಂಯೋಜನೆಯನ್ನು ಬಳಸಿಕೊಳ್ಳಬಹುದು.
- ಕೋರಿಕೆಯನ್ನು ಸಲ್ಲಿಸುವ ಒಂದು ಸಂಸ್ಥೆಯು ಒಂದು ನಿರ್ದಿಷ್ಟ ಸೇವೆ ಅಥವಾ ವ್ಯಾಪಾರವ್ಯವಹಾರಕ್ಕಾಗಿ ಭದ್ರತೆಯನ್ನು ಹೆಚ್ಚಿಸುವ ಸಲುವಾಗಿ ದೃಢೀಕರಣದ ವಿವಿಧ ಅಂಶಗಳನ್ನು ಒಳಗೊಂಡಂತೆ ಅದರ ಅಗತ್ಯತೆಗೆ ತಕ್ಕಂತೆ ಉಪ-ನಿಯಂತ್ರಣ (2)ರಲ್ಲಿ ನಿರ್ದಿಷ್ಟಪಡಿಸಲಾಗಿರುವ ಮಾದರಿಗಳಿಂದ ಸೂಕ್ತವಾದಂತಹ ಮಾದರಿ(ಗಳನ್ನು) ಆಯ್ಕೆ ಮಾಡಿಕೊಳ್ಳಬಹುದು. ಅನುಮಾನವನ್ನು ತಪ್ಪಿಸುವ ಸಲುವಾಗಿ, ಇ-ಕೆವೈಸಿ ದೃಢೀಕರಣವನ್ನು ಒಂದು ಸಲದ ಪಿನ್ ಮತ್ತು/ಅಥವಾ ಬಯೋಮೆಟ್ರಿಕ್ ಮಾಹಿತಿಯ ಆಧಾರದ ಮೇರೆಗಿನ ದೃಢೀಕರಣವನ್ನು ಬಳಸಿಕೊಳ್ಳುವ ಮೂಲಕ ಮಾತ್ರ ಮಾಡಲಾಗುವುದು ಎಂಬುದಾಗಿ ಈ ಮೂಲಕ ಸ್ಪಷ್ಟನೆಯನ್ನು ನೀಡಲಾಗುತ್ತಿದೆ.
ದೃಢೀಕರಣಕ್ಕಾಗಿ ಆಧಾರ್ ಸಂಖ್ಯೆಯನ್ನು ಹೊಂದಿರುವವರ ಒಪ್ಪಿಗೆಯನ್ನು ಪಡೆಯುವಿಕೆ
ಕೇಂದ್ರ/ರಾಜ್ಯ ಸರ್ಕಾರವು, ಸಹಾಯಧನದ ಸ್ವೀಕೃತಿಗಾಗಿ, ಪ್ರಯೋಜನಗಳು ಅಥವಾ ಸೇವೆಯನ್ನು ಸ್ವೀಕರಿಸುವ ಸಲುವಾಗಿ ಅಂತಹ ವ್ಯಕ್ತಿಗಳು ದೃಢೀಕರಣ ಪ್ರಕ್ರಿಯೆಗೆ ಒಳಪಡತಕ್ಕದ್ದು ಎಂಬ ಅಗತ್ಯತೆಯನ್ನು ಹೊಂದಿರಬಹುದು ಅಥವಾ ಆಧಾರ್ ಸಂಖ್ಯೆಯನ್ನು ಹೊಂದಿರುವುದಕ್ಕೆ ಸಾಕ್ಷಾಧಾರವನ್ನು ಒದಗಿಸುವ ಅಥವಾ ಯಾವುದೇ ಆಧಾರ್ ಸಂಖ್ಯೆಯನ್ನು ನೀಡದಿರುವ ಓರ್ವ ವೈಯಕ್ತಿಕ ವ್ಯಕ್ತಿಗೆ ಸಂಬಂಧಿಸಿದಂತೆ, ಅಂತಹ ವೈಯಕ್ತಿಕ ವ್ಯಕ್ತಿಯು ಆಧಾರ್ ನೋಂದಣಿಗಾಗಿ ಒಂದು ಅರ್ಜಿಯನ್ನು ಸಲ್ಲಿಸಬಹುದು.
ಓರ್ವ ವೈಯಕ್ತಿಕ ವ್ಯಕ್ತಿಗೆ ಆಧಾರ್ ಸಂಖ್ಯೆಯನ್ನು ನೀಡಿರದಿದ್ದಲ್ಲಿ, ಸಹಾಯಧನ, ಪ್ರಯೋಜನಗಳು ಅಥವಾ ಸೇವೆಯ ವಿತರಣೆಗಾಗಿ ಅಂತಹ ವೈಯಕ್ತಿಕ ವ್ಯಕ್ತಿಗೆ ಬದಲಿ ಅಥವಾ ಕಾರ್ಯಸಾಧ್ಯತೆಯುಳ್ಳ ಗುರುತಿನ ಮಾದರಿಯನ್ನು ನೀಡತಕ್ಕದ್ದು.
ಆಧಾರ್ ಅಧಿನಿಯಮದೊಂದಿಗೆ ಅನುಸರಣಾ ಕ್ರಮವಾಗಿ, ಕೋರಿಕೆಯನ್ನು ಸಲ್ಲಿಸುವ ಎಲ್ಲಾ ಸಂಸ್ಥೆಗಳು ಅಥವಾ ಸೇವೆಗಳನ್ನು ಒದಗಿಸುವವರು:
- ಅಧಿನಿಯಮದಲ್ಲಿ ಅನ್ಯಥಾ ಅನುವು ಮಾಡಿರದ ಹೊರತು, ದೃಢೀಕರಣದ ಉದ್ದೇಶಕ್ಕಾಗಿ ಭಾವಿಗುಪ್ರಾದ ಕಾರ್ಯನೀತಿ ಮತ್ತು ನಿಯಂತ್ರಣಗಳಲ್ಲಿ ಕಡ್ಡಾಯಗೊಳಿಸಿರುವ ರೀತಿಯಲ್ಲಿ ಗುರುತಿನ ಮಾಹಿತಿಯನ್ನು ಸಂಗ್ರಹಿಸುವ ಮೊದಲು ಆತನ/ಆಕೆಯ ಒಪ್ಪಿಗೆಯನ್ನು ಪಡೆಯತಕ್ಕದ್ದು.
- ಓರ್ವ ವೈಯಕ್ತಿಕ ವ್ಯಕ್ತಿಯ ಗುರುತಿನ ಮಾಹಿತಿಯನ್ನು ದೃಢೀಕರಣಕ್ಕಾಗಿ ಸಿಐಡಿಆರ್ ಗೆ ಸಲ್ಲಿಸುವ ಉದ್ದೇಶಕ್ಕಾಗಿ ಮಾತ್ರ ಬಳಸಲಾಗುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳತಕ್ಕದ್ದು.
ಈ ಆಧಾರ್ ಅಧಿನಿಯಮದಲ್ಲಿ ಯಾವುದೇ ಅನುವುಗಳೂ ಆಧಾರ್ ಸಂಖ್ಯೆಯನ್ನು ಓರ್ವ ವೈಯಕ್ತಿಕ ವ್ಯಕ್ತಿಯ ಗುರುತನ್ನು ರಾಜ್ಯ ಅಥವಾ ಯಾವುದೇ ಸಾಂಸ್ಥಿಕ ಸಂಸ್ಥೆ ಅಥವಾ ವ್ಯಕ್ತಿಯು ಆ ಸಮಯದಲ್ಲಿ ಜಾರಿಯಲ್ಲಿರುವ ಕಾನೂನು-ನಿಯಮಗಳ ಅನುಸಾರ ಅಥವಾ ಈ ನಿಟ್ಟಿನಲ್ಲಿ ಯಾವುದೇ ಗುತ್ತಿಗೆಯ ಷರತ್ತುಗಳ ಅನುಸಾರ ಯಾವುದೇ ಉದ್ದೇಶಕ್ಕಾಗಿರಲಿ ಸಾಭೀತುಪಡಿಸುವ ಸಲುವಾಗಿ ಬಳಸುವುದನ್ನು ತಡೆಯುವುದಿಲ್ಲ.
ಆದರೆ, ಆಧಾರ್ ಸಂಖ್ಯೆಯ ಬಳಕೆಯು ಅಧಿನಿಯಮದ ಅಧ್ಯಾಯ VIರ ಭಾಗ 8ರ ಅಡಿಯಲ್ಲಿನ ಕಾರ್ಯವಿಧಾನಗಳು ಮತ್ತು ಬದ್ಧತೆಗಳ ಷರತ್ತಿಗೆ ಒಳಪಟ್ಟಿರುತ್ತದೆ.
ದೃಢೀಕರಣ ಸೇವೆಗಳು
ಭಾವಿಗುಪ್ರಾವು, ದೃಢೀಕರಣಕ್ಕಾಗಿ ಆನ್ ಲೈನ್ ಸೇವೆಗಳು ಮತ್ತು ಇ-ಕೆವೈಸಿ ಮುಂತಾದ ಇತರೆ ಸೇವೆಗಳನ್ನು ಸೇವೆಗಳ ಅಧಿಕ ಪರಿಮಾಣದಲ್ಲಿನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಸಕ್ರಿಯ-ಸಕ್ರಿಯ ಮೋಡಿನಲ್ಲಿ ಸ್ಥಾಪಿಸಿರುವ ತನ್ನ ಎರಡು ಮಾಹಿತಿ ಕೇಂದ್ರಗಳು, ಅವೆಂದರೆ ಹೆಬ್ಬಾಳ ಮಾಹಿತಿ ಕೇಂದ್ರ (ಎಚ್ ಡಿ ಸಿ) ಮತ್ತು ಮನೇಸರ್ ಮಾಹಿತಿ ಕೇಂದ್ರ (ಎಂ ಡಿ ಸಿ), ಇವುಗಳ ಮೂಲಕ ದೃಢೀಕರಣ ಸೇವೆಯನ್ನು ಒದಗಿಸುತ್ತಿದೆ.
ಭಾವಿಗುಪ್ರಾದ ಕೇಂದ್ರ ಗುರುತಿಸುವಿಕೆಗಳ ಮಾಹಿತಿ ಭಂಡಾರವು (ಸಿಐಡಿಆರ್) ಪ್ರಸ್ತುತ ಹತ್ತಾರು ದಶಲಕ್ಷಗಳಷ್ಟು ದೃಢೀಕರಣಗಳನ್ನು ದೈನಂದಿನ ಆಧಾರದ ಮೇರೆಗೆ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ ಹಾಗೂ ಬೇಡಿಕೆಯು ಹೆಚ್ಚಾದಂತೆಲ್ಲಾ ಅದರ ಸಾಮರ್ಥ್ಯವನ್ನು ಅಧಿಕಗೊಳಿಸಬಹುದು. ಆಧಾರ್ ಸಂಖ್ಯೆಯನ್ನು ಹೊಂದಿರುವವರಿಗೆ ಸೇವೆಗಳನ್ನು ಒದಗಿಸುತ್ತಿದ್ದು, ಕೋರಿಕೆಯನ್ನು ಸಲ್ಲಿಸುವ ಸಂಸ್ಥೆಗಳು ದೇಶದ ಯಾವುದೇ ಮೂಲೆಯಲ್ಲಿಯೇ ಆದರೂ ಒಂದು ವಾಸ್ತವಿಕ ಸಮಯದಲ್ಲಿ ಪರಿಮಾಣವನ್ನು ಅಧಿಕಗೊಳಿಸಬಹುದಾದ ಹಾಗೂ ಅಂತರ-ಕಾರ್ಯಾಚರಣೆಗೊಳಿಸಬಹುದಾದ ರೀತಿಯಲ್ಲಿ ಆಧಾರ್ ಅನ್ನು ತಮ್ಮ ಕಾರ್ಯಕ್ಷೇತ್ರದ ತಂತ್ರಾಂಶ ಅನ್ವಯಗಳಲ್ಲಿ ಅಳವಡಿಸಿಕೊಂಡಿರುತ್ತವೆ.
